ಪಾಂಪೇ
ದಕ್ಷಿಣ ಇಟಲಿಯ ಕ್ಯಾಂಪೇನಿಯ ಪ್ರದೇಶದ ನಾಪಲೀ ಪ್ರಾಂತ್ಯದಲ್ಲಿ, ಸಾರೋ ನದೀ ಮುಖಜಭೂಮಿಯ ಉತ್ತರಕ್ಕೆ ವೆಸೂವಿಯಸ್ ಅಗ್ನಿಪರ್ವತದ ಬುಡದಲ್ಲಿ, ನೇಪ್ಲ್‍ಸ್ ನಗರಕ್ಕೆ 24 ಕಿಮೀ. ದೂರದಲ್ಲಿದ್ದ ಪ್ರಾಚೀನ ನಗರ. ಕ್ರಿ.ಶ. 79ರ ಆಗಸ್ಟ್ 24ರಂದು ವೆಸೂವಿಯಸ್ ಜ್ವಾಲಾಮುಖಿಯ ಸ್ಫೋಟದಿಂದ ಈ ನಗರ ಮುಚ್ಚಿಹೋಗಿ ನಾಶವಾಯಿತು. ಈಚೆಗೆ ಪ್ರಾಕ್ತನಶಾಸ್ತ್ರಜ್ಞರು ಈ ನಗರದ ನೆಲೆಯನ್ನು ಸಂಶೋಧಿಸಿದರು. ಸುಮಾರು 6 ಮೀ ಬೂದಿ ಮತ್ತು ಪಾಳು ಮಣ್ಣಿನಲ್ಲಿ ಹೂತುಹೋಗಿದ್ದ ನಗರದಲ್ಲಿ ಗ್ರೀಕ್ ಮತ್ತು ರೋಮನ್ ಯುಗಕ್ಕೆ ಸೇರಿದ್ದ ಮನೆಮಠಗಳು ಮತ್ತು ದಿನಬಳಕೆಯ ವಸ್ತುಗಳು ಅಚ್ಚಳಿಯದ ಸ್ಥಿತಿಯಲ್ಲಿ ದೊರಕಿದುವು. ಆ ಕಾರಣದಿಂದ ಆ ಕಾಲದ ನಗರಜೀವನದ ಪೂರ್ಣಪರಿಚಯ ಪಡೆಯಲು ಸಾಧ್ಯವಾಗಿದೆ. ಈಗ ಅದರ ಬಳಿಯಲ್ಲಿ ಒಂದು ಸಣ್ಣ ಪಟ್ಟಣವಿದೆ. ಅದರ ಜನಸಂಖ್ಯೆ 22,732 (1968). ಇದೊಂದು ಕ್ರೈಸ್ತ ಯಾತ್ರಾಸ್ಥಳ.

ಇತಿಹಾಸ ಪೂರ್ವಕಾಲದಲ್ಲಿ ಪ್ರಾಯಶಃ ಕ್ರಿ.ಪೂ 8ನೆಯ ಶತಮಾನದಲ್ಲಿ, ಈನೆಲೆಯಲ್ಲಿ ಜನವಸತಿ ಪ್ರಾರಂಭವಾಯಿತು. ಗ್ರೀಕ್ ವಸಾಹತುಗಾರರು ಇಲ್ಲಿಯ ರೇವುಪಟ್ಟಣದ ಪ್ರಯೋಜನ ಪಡೆದು ತಮ್ಮ ನೆಲೆವೀಡುಗಳನ್ನು ಸ್ಥಾಪಿಸಿದರು. ಕ್ರಿ.ಪೂ. 6ನೆಯ ಶತಮಾನದ ಡೋರಿಕ್ ಶೈಲಿಯ ಒಂದು ದೇವಾಲಯವನ್ನು ಇಲ್ಲಿ ಗುರುತಿಸಲಾಗಿದೆ. ರೋಮನ್ ಇತಿಹಾಸಕಾರ ಸ್ಟ್ರಾಬೋ ತಿಳಿಸಿರುವ ಎಟ್ರುಸ್ಕನ್ ಆಕ್ರಮಣಕ್ಕೆ ಮಾಹಿತಿಗಳನ್ನು ಈವರೆಗೆ ಪತ್ತೆಹಚ್ಚಲಾಗಿಲ್ಲ. ಅನಂತರದ ಶತಮಾನದಲ್ಲಿ ಸಾಮ್ನೈಟ್ ಪಂಗಡದವರು ಪಾಂಪೆಯನ್ನು ವಶಪಡಿಸಿಕೊಂಡರು. ಆಗ ಪ್ರಚಲಿತವಿದ್ದ ಆಸ್ಕನ್ ಭಾಷೆ, ಜೀವನಪದ್ಧತಿ, ಮತಾಚಾರ, ಆಡಳಿತಪದ್ಧತಿ-ಇವೆಲ್ಲವೂ ಸಾಮ್ನೈಟರ ಕೊಡುಗೆಗಳು.

ಸುಮಾರು ಒಂದೂವರೆ ಶತಮಾನ ಕಾಲ ಸಾಮ್ನೈಟ್ ಗ್ರೀಕರ ವಶದಲ್ಲಿದ್ದ ಆ ನಗರದ ಮೇಲೆ ಕ್ರಿ,ಪೂ 310ರಲ್ಲಿ ರೋಮನರ ದೃಷ್ಟಿಬಿದ್ದರೂ ಏನೂ ಪ್ರಯೋಜನವಾಗಲಿಲ್ಲ. ರೋಮ್ ಮತ್ತು ಕಾರ್ತೇಜಿನ ನಡುವೆ ನಡೆದ ಫ್ಯೂನಿಕ್ ಯುದ್ಧದಲ್ಲಿ ಪಾಂಪೇ ಆಸಕ್ತಿ ತೋರಿಸಲಿಲ್ಲ. ಸ್ವಲ್ಪ ಕಾಲದ ಅನಂತರ ಇಟಲಿಯ ಕೆಲವು ಪ್ರಾಂತ್ಯಗಳು ರೋಮನರ ವಿರುದ್ಧ ದಂಗೆಯೆದ್ದಾಗ ಪಾಂಪೆಯ ಅಧಿಕಾರಿಗಳು ತೀವ್ರ ಆಸಕ್ತಿ ವಹಿಸಿದರು. ಅದರ ಫಲವಾಗಿ ಕ್ರಿ.ಪೂ 89ರಲ್ಲಿ ರೋಮಿನ ಕಾನ್ಸಲ್ ಆಗಿದ್ದ ಕಾರ್ನೀಲಿಯಸ್ ಸುಲ್ಲ ಎಂಬವನು ಪಾಂಪೆಯನ್ನು ವಶಪಡಿಸಿಕೊಂಡು ತನ್ನ ಸೋದರನ ಪುತ್ರನಾದ ಪಬ್ಲಿಯನ್ ಸುಲ್ಲನನ್ನು ಅಲ್ಲಿಯ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಆಗ ಪಾಂಪೆಯಲ್ಲಿ ರೋಮನ್ ಸಂಸ್ಕøತಿಯ ಪ್ರಭಾವ ತೀವ್ರವಾಗಿ ಬೆಳೆಯಿತು. 59ರಲ್ಲಿ ಪಾಂಪೆಯ ಬಯಲುರಂಗಮಂದಿರದಲ್ಲುಂಟಾದ ಗಲಭೆಗಳ ಕಾರಣದಿಂದ ಆ ನಗರದಲ್ಲಿ ಖಡ್ಗಯುದ್ಧ ಪ್ರದರ್ಶನಗಳನ್ನು ಬಹಿಷ್ಕರಿಸಲಾಯಿತೆಂದು ತಿಳಿದುಬಂದಿದೆ. ವ್ಯಾಪಾರ, ವ್ಯವಸಾಯ, ನೌಕಾಯಾನ ಮುಂತಾದ ಹಲವು ಕಸುಬುಗಳು ಅಭಿವೃದ್ಧಿಹೊಂದಿ ಆ ಪ್ರಾಂತ್ಯದ ಪ್ರಮುಖ ನಗರವಾಗಿ ಉತ್ಕರ್ಷೆಹೊಂದಿದ್ದ ಪಾಂಪೇ ಹಠಾತ್ತಾಗಿ 63ರ ಫೆಬ್ರವರಿಯಲ್ಲಿ ಸಂಭವಿಸಿದ ಭೂಕಂಪದಿಂದ ಬಹಳಮಟ್ಟಿಗೆ ನಾಶವಾಯಿತು. ಪಾಂಪೆಯ ಪ್ರಾಚೀನ ಗ್ರೀಕ್ ಸಂಸ್ಕøತಿಜನ್ಯವಾದ ಅನೇಕ ಕಟ್ಟಡಗಳು ಆಗ ಹಾಳಾದುವು.

ಮತ್ತೆ ಜೀರ್ಣೋದ್ಧಾರಕಾರ್ಯ ನಡೆಯುತ್ತಿದ್ದಾಗ 79ರ ಆಗಸ್ಟ್ 24ರಂದು ವೆಸೂವಿಯಸ್ ಸ್ಫೋಟಗೊಂಡು ನಗರ ಸಂಪೂರ್ಣವಾಗಿ ಹಾಳಾಯಿತು. ತೊಂದರೆಗೀಡಾದ ಜನರ ಸಹಾಯಕ್ಕೆ ರೋಮನ್ ದಳಪತಿ ಹಿರಿಯ ಪ್ಲಿನಿ ಧಾವಿಸಿ ತಾನೆ ಪ್ರಾಣ ಬಿಟ್ಟನೆಂದು ಹೇಳಲಾಗಿದೆ. ಬೆಂಕಿಯ ಕಣಗಳು ಮತ್ತು ಬೂದಿಯಲ್ಲಿ ನಗರ ಹೂತುಹೋಯಿತು. ಅನಂತರ ಇಲ್ಲಿ ಪಾಳು ಮಣ್ಣು ಸೇರಿತು. ಈಗ ನಗರದ ಅವಶೇಷಗಳು ನೆಲದ ಮಟ್ಟದಿಂದ 5-6 ಮೀಟರ್‍ಗಳಷ್ಟು ಆಳದಲ್ಲಿದೆ.
ನಗರಯೋಜನೆ ಮತ್ತು ವಾಸ್ತುಶಿಲ್ಪ : ಪಾಂಪೇ ಒಂದು ದೀರ್ಘ ವೃತ್ತಾಕಾರದ ತಳಹದಿಯ ನಗರ ; ಪ್ರಾಚೀನ ಕಾಲದಲ್ಲಿ ಲಾವಾದಿಂದಾಗಿ ಉತ್ತರದಿಂದ ದಕ್ಷಿಣಕ್ಕೆ ನಿರ್ಮಿತವಾದ ಪ್ರಾಕೃತಿಕ ಶಿಲಾರಾಶಿ ಅದನ್ನು ಕೋಟೆಯಂತೆ ರಕ್ಷಿಸುತ್ತಿತ್ತು. ನೈಋತ್ಯ ದಿಕ್ಕಿನಲ್ಲಿ ನಗರ ಪ್ರದೇಶ ಬಹುಮಟ್ಟಿಗೆ ಸಮತಟ್ಟಾಗಿತ್ತು ; ಕೆಲವು ಪ್ರದೇಶಗಳಲ್ಲಿ ಹಂತಹಂತಗಳಲ್ಲಿದ್ದ ಸಮತಟ್ಟಾದ ಪ್ರದೇಶಗಳಲ್ಲಿ ಪ್ರಮುಖ ಸಾರ್ವಜನಿಕ ಮಂದಿರಗಳನ್ನೂ ದೇವಾಲಯಗಳನ್ನೂ ನಿರ್ಮಿಸಲಾಗಿತ್ತು. ಆಗ್ನೇಯ ಮೂಲೆಯ ತುದಿಯ ಸಮತಟ್ಟಾದ ಪ್ರದೇಶದಲ್ಲಿ ಬಯಲುರಂಗಮಂದಿರವನ್ನು ನಿರ್ಮಿಸಲಾಗಿತ್ತು. ನೈಋತ್ಯ ಮೂಲೆಯಲ್ಲಿ ವೀನಸ್ ದೇವತೆಯ ಮಂದಿರವಿತ್ತು. ಗ್ರೀಕ್ ವಾಸ್ತು ಪದ್ಧತಿಯಂತೆ ನಗರ ಪ್ರದೇಶದಲ್ಲಿ ಪೂರ್ವ-ಪಶ್ಚಿಮವಾಗಿಯೂ ಉತ್ತರ-ದಕ್ಷಿಣವಾಗಿಯೂ ಅನೇಕ ನೇರವಾದ ಮುಖ್ಯ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಅವುಗಳಿಂದ ನಗರಪ್ರದೇಶ ಹಲವಾರು ಆಯಾಕಾರದ ಚೌಕಗಳಾಗಿ ವಿಭಾಗಗೊಂಡಿತ್ತು. ಹಲವು ವಾಸಗೃಹಗಳನ್ನೊಳಗೊಂಡ ಅನೇಕ ಚೌಕಗಳನ್ನು 9 ಪ್ರದೇಶಗಳಾಗಿ ವಿಂಗಡಿಸಲಾಗಿತ್ತು.

ನಗರ ನಿರ್ಮಾಣದ ಇತಿಹಾಸವನ್ನು ಆರು ಪ್ರತ್ಯೇಕ ಕಾಲಗಳಿಗೆ ನಿರ್ದೇಶಿಸಬಹುದಾಗಿದೆ : 1. ಸಾಮ್ನೈಟ್ ಪೂರ್ವಯುಗ : ಕ್ರಿ.,ಪೂ. 420ರ ವರೆಗೆ. ಈ ಕಾಲದ ಗಮನಾರ್ಹ ಕಟ್ಟಡವೆಂದರೆ ಡೋರಿಕ್ ಶೈಲಿಯ ದೇವಾಲಯ. 2. ಆದಿ ಸಾಮ್ನೈಟ್ ಯುಗ : ಕ್ರಿ.,ಪೂ 420-250. ಈ ಕಾಲದಲ್ಲಿ ಆ ಮೊದಲ ಕಟ್ಟಡಗಳ ದುರಸ್ತಿಯ ಕೆಲಸ ನಡೆಯಿತಲ್ಲದೆ ಜ್ಯೂಪಿಟರ್ ಮಂದಿರವನ್ನು ನಿರ್ಮಿಸಲಾಯಿತು. 3. ಅಂತ್ಯ ಸಾಮ್ನೈಟ್ ಯುಗ : ಕ್ರಿ,.ಪೂ 250-80. ಈ ಯುಗದಲ್ಲಿ ವಿಸ್ತøತ ಗ್ರೀಕ್ ಅಥವಾ ಹೆಲೆನಿಕ್ ಸಂಸ್ಕøತಿಯ ಪ್ರಭಾವ ಎದ್ದು ಕಾಣುತ್ತದೆ. ಹಳೆಯ ಕಟ್ಟಡಗಳ ದುರಸ್ತಿಯಾಯಿತಲ್ಲದೆ ಕೋಟೆಗೆ ರಕ್ಷಣಾ ಗೋಪುರಗಳನ್ನು ನಿರ್ಮಿಸಲಾಯಿತು. ಮುಖ್ಯ ಕಟ್ಟಡವೆಂದರೆ ಅಪಾಲೋ ಮಂದಿರ. 4. ರೋಮನ್ ವಸಾಹತು ಯುಗ : ಕ್ರಿ,ಪೂ 80-23. ಕಾಂಕ್ರೀಟ್ ಮತ್ತು ಸುಟ್ಟ ಇಟ್ಟಿಗೆಗಳ ಕಟ್ಟಡ ಪದ್ಧತಿ ಬಳಕೆಗೆ ಬಂತು. ಓಡಿಯನ್ ಪ್ರದರ್ಶನಗೃಹ. ವಿಶಾಲ ಬಯಲು ರಂಗಮಂದಿರ, ವೀನಸ್ ಮತ್ತು ಜû್ಯೂಸ್ ದೇವಾಲಯಗಳು ಪ್ರಮುಖ ಕಟ್ಟಡಗಳು. 5 ಆಗಸ್ಟನ್ ಮತ್ತು ಜೂಲಿಯೊ-ಕ್ಲಾಡಿಯನ್ ಯುಗ : ಕ್ರಿ.ಪೂ 23-ಕ್ರಿ,ಶ 62 ಈ ಕಾಲದಲ್ಲಿ ಕಟ್ಟಡಗಳ ಹೊರಮೈಗೆ ಅಮೃತಶಿಲೆಯ ಹೊದಿಕೆಯನ್ನು ಮತ್ತು ಗ್ರೀಕ್ ವರ್ಣಚಿತ್ರಗಳ ಮೂಲಕ ಅಲಂಕರಣವನ್ನು ಒದಗಿಸಲಾಗುತ್ತಿತ್ತು. ಹಲವಾರು ಹೊಸ ಕಟ್ಟಡಗಳನ್ನು ನಿರ್ಮಿಸಲಾಯಿತು. ಹಳೆಯ ಕಟ್ಟಡಗಳನ್ನು ನವೀಕರಿಸಲಾಯಿತು. ಫ್ಲೇವಿಯನ್ ಯುಗ : ಕ್ರಿ,.ಶ 62-79. ಇಟ್ಟಿಗೆ ಮತ್ತು ಕಾಂಕ್ರೀಟ್ ಹೆಚ್ಚು ಬಳಕೆಯಲ್ಲಿತ್ತು. ಅನೇಕ ಕಟ್ಟಡಗಳನ್ನು ಪುನರ್ನಿರ್ಮಿಸಲಾಯಿತು. ಐಸಿಸ್ ದೇವಿಯ ಮಂದಿರ ಗಮನಾರ್ಹ.

ಕೆಲವು ಪ್ರಮುಖ ಕಟ್ಟಡಗಳು : ಪಾಂಪೆಯ ಪ್ರಮುಖ ಸಾರ್ವಜನಿಕ ಕಟ್ಟಡಗಳು ನೈಋತ್ಯ ಮೂಲೆಯ ಸಿವಿಲ್ ಫೋರಮ್‍ನ ಭಾಗದಲ್ಲಿದ್ದುವು. ಅಲ್ಲಿದ್ದ ಕಟ್ಟಡಗಳಲ್ಲಿ ಜ್ಯೂಪಿಟರ್, ಜುನೋ ಮತ್ತು ಮಿನರ್ವ ದೇವಾಲಯಗಳ ಸಮೂಹ, ಅಪಾಲೋ ಮಂದಿರ, ನ್ಯಾಯಾಲಯಗಳಿದ್ದ ಬೆಸಿಲಿಕ ಇವು ಗಮನಾರ್ಹ. ಕಂಬಗಳಿಂದ ಕೂಡಿದ ಹಜಾರ, ಚಿತ್ರಗಳಿಂದ ಅಲಂಕೃತವಾದ ಗೋಡೆಗಳು ಇವು ಹೆಲೆನಿಸ್ಟಿಕ್ ಶೈಲಿಯ ಪ್ರತೀಕಗಳಾಗಿದ್ದುವು. ವಿಧಾನ ಪರಿಷತ್ತಿನ (ಕ್ಯೂರಿಯ) ಭವನ ಜವಳಿ ಕೆಲಸಗಾರರ ಮಹಾಸಂಘದ ಕಟ್ಟಡ ಇವು ಉಳಿದ ನಿರ್ಮಾಣಗಳ ಪೈಕಿ ಗಮನಾರ್ಹ.

ಈ ನಗರದ ಆಗ್ನೇಯ ದಿಕ್ಕಿನಲ್ಲಿರುವ ಮುಕ್ಕೋನ ಚೌಕ ಬಹಳ ಪ್ರಾಚೀನ ಭಾಗಗಳಲ್ಲಿ ಒಂದು. ಅಲ್ಲಿರುವ ಡೋರಿಕ್ ಶೈಲಿಯ ದೇವಾಲಯದ ಬಳಿ ಸಾರ್ವಜನಿಕರ ಮನೋರಂಜನೆಗಾಗಿ ಕೆಲವು ನಾಟ್ಯ ಮಂದಿರಗಳನ್ನು ನಿರ್ಮಿಸಲಾಗಿತ್ತು. ಓಡಿಯನ್ ಮತ್ತು ವಿಶಾಲ ರಂಗಮಂದಿರಗಳು, ಖಡ್ಗಯುದ್ಧ ಪ್ರದರ್ಶನ ಗೃಹ, ಜû್ಯೂಸ್ ದೇವಾಲಯ ಇವು ಆ ಭಾಗದ ಮುಖ್ಯ ಕಟ್ಟಡಗಳು. ನಗರದ ಮಧ್ಯಭಾಗದಲ್ಲಿ ಸಾರ್ವಜನಿಕ ಸ್ನಾನಗೃಹಗಳನ್ನು ನಿರ್ಮಿಸಲಾಗಿತ್ತು.

ಇವಲ್ಲದೆ ಹಲವಾರು ವ್ಯಕ್ತಿಗಳ ವಾಸಗೃಹಗಳನ್ನು ಗುರುತಿಸಲಾಗಿದೆ. ಶ್ರೀಮಂತ ಮತ್ತು ಮಧ್ಯಮ ವರ್ಗಗಳವರ ಹಾಗೂ ಸಾಮಾನ್ಯರ ವಾಸಗೃಹಗಳ ವಿಶಿಷ್ಟ ಲಕ್ಷಣಗಳನ್ನು ಅವುಗಳಲ್ಲಿ ಕಂಡುಬರುವ ಉಪಕರಣ ಮತ್ತು ನಿತ್ಯಬಳಕೆ ವಸ್ತುಗಳನ್ನೂ ಪರಿಶೀಲಿಸಿದರೆ ಆಗಿನ ಸಾಮಾಜಿಕ ವರ್ಗಗಳ ನಡುವೆ ಇದ್ದ ವ್ಯತ್ಯಾಸಗಳನ್ನು ತಿಳಿದುಕೊಳ್ಳಬಹುದಾಗಿದೆ. ಶಸ್ತ್ರವೈದ್ಯನ ಮನೆಯೆಂದು ಕರೆಯಲಾದ ಒಂದು ಕಟ್ಟಡದಲ್ಲಿ ಶಸ್ತ್ರಚಿಕಿತ್ಸೆಗೆ ಬಳಸುವ ಹಲವು ಉಪಕರಣಗಳು ದೊರಕಿವೆ. ಲ್ಯಾಬಿರಿಂತ್ ಮನೆಯೆಂದು ಹೆಸರಾದ ಮತ್ತೊಂದು ಕಟ್ಟಡದಲ್ಲಿ ವಾಸ್ತುವಿನ್ಯಾಸಕ್ಕೆ ಪೂರಕವಾದ ಅನೇಕ ಭಿತ್ತಿವರ್ಣಚಿತ್ರಗಳಿವೆ. ಅವು ಚಿತ್ರಕಲೆಯ ಬೆಳೆವಣಿಗೆಯ ದ್ವಿತೀಯ ಹಂತಕ್ಕೆ ಸೇರಿದವು. ನಗರದ ಕೊನೆಗಾಲದಲ್ಲಿ ಮನೆಗಳ ಗೋಡೆಗಳ ಮೇಲೆ ಗಾರೆಯ ಶಿಲ್ಪಗಳ ಅಲಂಕರಣಗಳಿದ್ದುದು ತಿಳಿದುಬರುತ್ತದೆ. ಅಲ್ಲದೆ ವಿಶಾಲವಾದ ಪಡಸಾಲೆಗಳಲ್ಲಿ ಇಟ್ಟಿಗೆ ಗಾರೆಗಳಿಂದ ನಿರ್ಮಿಸಿದ ಕಂಬಗಳಿದ್ದುವು. ಈ ಅಂಶಗಳು ರೋಮನರ ವಾಸ್ತುಪದ್ಧತಿಯ ಪ್ರತೀಕಗಳಾಗಿದ್ದುವು. ಆ ಸುಮಾರಿನಲ್ಲಿ ನಗರಪ್ರದೇಶದಲ್ಲಿ ಸ್ಥಳಾಭಾವ ತಲೆದೋರಿದ್ದರಿಂದ ಮೊದಲಿನ ವಿಶಾಲ ಶ್ರೀಮಂತಗೃಹಗಳನ್ನು ಒಡೆದು ಸಣ್ಣ ವಾಸಗೃಹಗಳಾಗಿಯೋ ಸಣ್ಣ ಅಂಗಡಿಗಳಾಗಿಯೋ ಪರಿವರ್ತಿಸಲಾಯಿತು. ಹೊಸದಾಗಿ ಮೇಲಂತಸ್ತುಗಳನ್ನು ನಿರ್ಮಿಸಿ ವಾಸಕ್ಕೆ ಬಳಸಲಾಯಿತು. ಅವಕ್ಕೆ ಮರದ ಸೋಪಾನಗಳನ್ನೊದಗಿಸಲಾಗಿದೆ. ಆ ಕಾಲದಲ್ಲೂ ವಿಶಾಲವಾದ, ಉತ್ತಮ, ಅಭಿರುಚಿಯನ್ನು ಸೂಚಿಸುವ, ಶ್ರೀಮಂತ ಗೃಹಗಳ ನಿರ್ಮಾಣ ನಡೆಯುತ್ತಿತ್ತು. ಮಿನ್ಯಾಂಡರನ ಮನೆ, ಪ್ರೇಮಿಗಳ ಮನೆಗಳು ಇವನ್ನು ಹೆಸರಿಸಬಹುದು. ಮಧ್ಯಮ ವರ್ಗದವರ ವಸತಿಗಳಲ್ಲಿ ಪುರೋಹಿತ ಅಮಾಂಡಸನ ಮತ್ತು ನೀತಿಶಾಸ್ತ್ರಜ್ಞನ ಮನೆಗಳು ಗಮನಾರ್ಹ.

ಚಿತ್ರ, ಶಿಲ್ಪ ಮತ್ತಿತರ ಕುಶಲ ಕಲೆಗಳು : ಪ್ರಾಚೀನ ಕಾಲದ ಅತ್ಯುತ್ತಮ ಚಿತ್ರಕಲೆಯ ನಿದರ್ಶನಗಳನ್ನು ಉಳಿಸಿಕೊಂಡ ನಗರಗಳಲ್ಲಿ ಪಾಂಪೆಯೂ ಒಂದಾಗಿತ್ತು. ಅಲ್ಲಿಯ ಚಿತ್ರಕಲೆಯನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ : ಮೊದಲನೆಯ ಹಂತ ; ಕ್ರಿ.ಪೂ 180-80. ಈ ಕಾಲದಲ್ಲಿ ಗಾರೆಯ ಮೇಲಿನ ಚಿತ್ರಗಳು ಅಮೃತಶಿಲೆಯ ಬಣ್ಣಗಳನ್ನು ಹೋಲುತ್ತವೆ. ಎರಡನೆಯ ಹಂತ : (ಕ್ರಿ.ಪೂ 80-ಕ್ರಿ..ಶ.14). ಈ ಕಾಲದ ಚಿತ್ರಗಳಲ್ಲಿ ಯಥಾದೃಷ್ಟ ರೂಪಣದ ಮತ್ತು ಆಯಾಮ ನಿರೂಪಣೆಯ ಪ್ರಯತ್ನಗಳು ನಡೆದುವು. ಈ ಶೈಲಿಯಲ್ಲಿ ವಾಸ್ತು ಅಲಂಕರಣ ಪ್ರಧಾನವಾಗಿತ್ತು. ಪೌರಾಣಿಕ, ಧಾರ್ಮಿಕ ಮತ್ತು ಶೌರ್ಯ ನಿರೂಪಣೆಯ ದೃಶ್ಯಗಳಿಗೆ ಪ್ರಾಧಾನ್ಯ ದೊರಕಿತ್ತು. ಮೂರನೆಯ ಅಥವಾ ಈಜಿಪ್ಟ್ ಪ್ರಭಾವಿತ ಹಂತ : 14-62. ಈ ಕಾಲದಲ್ಲಿ ಅಲಂಕರಣ ಚಿತ್ರಗಳಿಗೆ ಪ್ರಾಮುಖ್ಯ ನೀಡಲಾಯಿತು. ಬಹಳ ಸೂಕ್ಷ್ಮವಾದ ಕೌಶಲಪೂರ್ಣವಾದ ಚಿತ್ರಗಳನ್ನು ರಚಿಸಲಾಯಿತು. ನಾಲ್ಕನೆಯ ಅಥವಾ ಭ್ರಾಮಕ ಹಂತ : 62-79. ಇಡೀ ಗೋಡೆಯ ಮೇಲೆ ವಸ್ತು ಪ್ರಾಧಾನ್ಯವಿಲ್ಲದ ಅಲಂಕಾರಮಯ ಚಿತ್ರಗಳನ್ನು ಬಿಡಿಸಲಾಗಿತ್ತು.

ಶ್ರೀಮಂತರ ಗೃಹಗಳಲ್ಲಿ ವಿವಿಧ ಬಣ್ಣಗಳ ಚಿತ್ರಗಳನ್ನು ಕಾಣಬಹುದಾಗಿತ್ತು. ಹಲವು ಬಣ್ಣಗಳ ಕಲ್ಲುಗಳ ಜೋಡಣೆಯಿಂದ ಇಂಥ ವರ್ಣಾಲಂಕರಣ ಮಾಡಲಾಗುತ್ತಿತ್ತು. ಮೃಗಗೃಹದಲ್ಲಿ ವರ್ಣಚಿತ್ರದ ಅನುಕರಣೆಯಲ್ಲಿ ರಚಿಸಲಾಗಿರುವ ಇಸ್ಸಸ್‍ನ ಕದನದ ಚಿತ್ರ ಇಂಥ ಚಿತ್ರಗಳ ಪೈಕಿ ಅತ್ಯಂತ ಸುಂದರವಾದ ಕೃತಿ, ಸಿಸಿರೋನ ಭವನದಲ್ಲಿದ್ದ ವಿವಿಧ ಬಣ್ಣಗಳ ಜೋಡಣೆಯ ಇಂಥ ಮತ್ತೊಂದು ಚಿತ್ರದಲ್ಲಿ ಹೆಲೆನಿಕ್ ಯುಗದ ಜನಜೀವನ ನಿರೂಪಣೆಯ ದೃಶ್ಯಗಳನ್ನು ಕಾಣಬಹುದು.

ಪಾಂಪೇ ನಗರದಲ್ಲಿ ದೊರಕಿರುವ ಅವಶೇಷಗಳಲ್ಲಿ ಕಂಚಿನ ಮತ್ತು ಕಲ್ಲಿನ ಹಲವಾರು ಶಿಲ್ಪ ಕೃತಿಗಳಿವೆ. ಇವುಗಳಲ್ಲಿ ಸಾರ್ವಜನಿಕ ಕಟ್ಟಡ. ಉದ್ಯಾನ ಮತ್ತು ನೀರು ಚಿಲುಮೆಗಳನ್ನು ಅಲಂಕರಿಸಲು ಬಳಸಿದ್ದ ಕಂಚಿನ ಮಾನವ ಮತ್ತು ಪ್ರಾಣಿಗಳ ಶಿಲ್ಪಗಳು ಬಹಳ ಮೋಹಕವಾಗಿವೆ.
(ಬಿ.ಕೆ.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ